ಮೊಗಲರು 1526 ರಿಂದ 1858ರ ತನಕ ಸುಮಾರು ಮೂರು ಶತಮಾನಗಳಿಗೂ ಹೆಚ್ಚು ಕಾಲ ಭಾರತವನ್ನು ಆಳಿದ ವಂಶ. ಮೊದಲನೆಯ ಪಾಣಿಪತ್ ಕನದನದಲ್ಲಿ ಇಬ್ರಾಹಿಂ ಲೋದಿಯನ್ನು ಸೋಲಿಸಿ ದೆಹಲಿ ಮತ್ತು ಆಗ್ರಗಳನ್ನು ವಶಪಡಿಸಿಕೊಂಡ ಜಾಹಿರುದ್ದೀನ್ ಮಹಮದ್ ಬಾಬರ್ ಈ ವಂಶದ ಸ್ಥಾಪಕ. ಈತ ತಾಯಿಯ ಕಡೆಯಿಂದ ತೈಮೂರನ ಮತ್ತು ತಂದೆಯ ಕಡೆಯಿಂದ ಚೆಂಗೀಜ್‍ಖಾನನ ವಂಶಕ್ಕೆ ಸೇರಿದವ. 1527ರಲ್ಲಿ ಸಂಭವಿಸಿದ ಖನುವಾ ಕದನದಲ್ಲಿ ಮೇವಾಡದ ರಾಣಾ ಸಂಗ್ರಾಮವನ್ನು ಸೋಲಿಸಿದ ಬಾಬರ್ ಮರುವರ್ಷವೇ ಆಘ್‍ಘನ್ನರನ್ನು ಗೋಗ್ರ ಕದನದಲ್ಲಿ ಸೋಲಿಸಿ ತನ್ನ ರಾಜ್ಯವನ್ನು ಬಿಹಾರ ಬಂಗಾಲಗಳಿಗೂ ವಿಸ್ತರಿಸಿದ. ಈ ವಿಜಯಗಳಿಂದ ಉತ್ತರ ಭಾರತದ ಸಾರ್ವಭೌಮನಾದ ಬಾಬರ್ 1530ರಲ್ಲಿ ಕೊನೆಯುಸಿರೆಳೆದ.

ಮೊಗಲ್ ವಂಶಕ್ಕೆ ಸೇರಿದ ಹತ್ತೊಂಬತ್ತು ಸುಲ್ತಾನರ ಪೈಕಿ ಮೊದಲ ಆರು ಮಂದಿಯನ್ನು, ಎಂದರೆ ಬಾಬರ್ (1526 - 30), ಹುಮಾಯೂನ್ (1530 - 56); 1540 - 55ರ ಅವಧಿಯನ್ನು ಹೊರತುಪಡಿಸಿ), ಅಕ್ಬರ್ (1556 - 1605), ಜಹಾಂಗೀರ್ (1605 - 27), ಷಹಜಹಾನ್ (1627 - 58) ಹಾಗೂ ಔರಂಗಜೇಬ ಇವರನ್ನು ( 1658 - 1707) ಮಹಾಮೊಗಲರೆಂದು ಕರೆಯಲಾಗಿದೆ. (ನೋಡಿ- ಭಾರತದ-ಇತಿಹಾಸ) ಮತ್ತು ಆಯಾ ಹೆಸರಿನ ಅರಸರು).

ಅಕ್ಬರನ ಕಾಲದಲ್ಲಿ ಇಡೀ ಉತ್ತರ ಭಾರತ ಹಾಗೂ ದಖನ್ನಿನ ಖಾಂದೇಶ್ ಮತ್ತು ಬೀರಾರ್ ಪ್ರದೇಶಗಳು ಮೊಗಲ್ ಸಾಮ್ರಾಜ್ಯಕ್ಕೆ ಸೇರಿದ್ದುವು. ಔರಂಗeóÉೀಬನ ಕಾಲದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಮೊಗಲ್ ಸಾಮ್ರಾಜ್ಯ ವಿಸ್ತರಿಸಿತು. ಆದರೆ, ನಿಭಾಯಿಸಲಾಗದಷ್ಟು ಬೃಹತ್ತಾಗಿ ಸಾಮ್ರಾಜ್ಯ ಬೆಳೆದುಬಿಟ್ಟಿತೆಂಬ ಸತ್ಯವನ್ನು ತರುವಾಯ ಸಂಭವಿಸಿದ ಘಟನೆಗಳು ತೋರಿಸಿಕೊಟ್ಟವು. ಅಕ್ಬರ್ ಮತ್ತು ಔರಂಗಜೇಬ್ ಅನುಸರಿಸಿದ ಸಾಮ್ರಾಜ್ಯಷಾಹಿ ರೀತಿನೀತಿಗಳಲ್ಲಿ ಅಜಗಜಾಂತರವಿತ್ತು. ಅಕ್ಬರನ ಧರ್ಮಸಹಿಷ್ಣುತೆಯ ನೀತಿಯನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಭಾರತವನ್ನು ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡಲು ಹೊರಟ ಔರಂಗಜೇಬನ ನೀತಿಯಿಂದಾಗಿ ಸ್ವಾಭಾವಿಕವಾಗಿಯೇ ಅಸಮಾಧಾನದಿಂದ ಕುದಿದ ಹಿಂದೂಗಳು ದಂಗೆ ಎದ್ದರು. ಅವರ ಪೈಕಿ ಪ್ರಮುಖರು ಮಹಾರಾಷ್ಟ್ರದಲ್ಲಿ ಶಿವಾಜಿಯ ನೇತೃತ್ವದಲ್ಲಿ ಮರಠರು. ಅನಂತರ ಪಂಜಾಬಿನಲ್ಲಿ ಸಿಖ್ಖರು. ಅಕ್ಬರನ ಕಾಲದಿಂದ ಮೊಗಲ್ ಸಿಂಹಾಸನಕ್ಕೆ ನಿಷ್ಠಬೆಂಬಲಿಗರಾಗಿದ್ದ ರಜಪೂತರು ಕೂಡ, ವಿಶೇಷವಾಗಿ ರಾಜಪುಟಾನದವರು ಮತ್ತು ಬುಂದೇಲಖಂಡದ ಜಾಟರು, ಮೊಗಲ ನೀತಿಯನ್ನು ವಿರೋಧಿಸುವ ಪ್ರವೃತ್ತಿ ತೋರಿದರು. ಇಷ್ಟೇ ಅಲ್ಲದೆ, ಪೋರ್ಚುಗಲ್, ಹಾಲೆಂಡ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಿಂದ ಬಂದ ಐರೋಪ್ಯ ವ್ಯಾಪಾರಿಗಳ ಶಾಂತಿಯುತ ವಾಣಿಜ್ಯ ವ್ಯವಹಾರಗಳ ಮರೆಯಲ್ಲಿ ರಾಜಕೀಯ ಮಹತ್ವಾಕಾಂಕ್ಷೆಗಳಿದ್ದವು. ಸುಸಜ್ಜಿತ ನೌಕಾಬಲ, ಸೈನಕರ ಶಿಸ್ತು ತರಬೇತಿ, ಯೋಜನಾ ನೈಪುಣ್ಯಗಳಲ್ಲಿ ಮೊಗಲರು ಬ್ರಟಿಷರಿಗೆ ಸಾಟಿಯಾಗಿರಲಿಲ್ಲ.

ಜಹಾಂಗೀರ್ ಆಳ್ವಿಕೆಯ ಅಂತ್ಯದಿಂದ ಮೊಗಲ್ ಸಿಂಹಾಸನದ ಉತ್ತರಾಧಿಕಾರಕ್ಕಾಗಿ ನಡೆದ ಕಚ್ಚಾಟ, ಮೊಗಲ್ ಸಾಮ್ರಾಜ್ಯದ ಸಾಮಾನ್ಯ ಲಕ್ಷಣವಾಗಿ ಪರಿಣಮಿಸಿತು. ಇದರಿಂದ ಅಧಿಕಾರಿಶಕ್ತಿ, ಸದೃಢತೆ ಶಿಥಿಲಗೊಂಡವು. ಹೀಗಾಗಿ ತರುವಾಯದ ಮೊಗಲ್ ಸಮ್ರಾಟರೆಂದು ಪರಿಚಿತರಾದ ಸುಲ್ತಾನರ ಆಳ್ವಿಕೆಯ ಕಾಲಗಳಲ್ಲಿ ಸಾಮ್ರಾಜ್ಯದ ಎಲ್ಲೆಗಳು ಬಲುಬೇಗನೆ ಕುಗ್ಗತೊಡಗಿದವು.
1739ರಲ್ಲಿ ನಾದಿರ್ ಷಹ ಮತ್ತು 1751 - 67ರ ತನಕ ಅಹಮದ್ ಷಹ ಅಬ್ದಾಲಿಯ ಆಕ್ರಮಣಗಳಿಂದ ಮೊಗಲ್ ಸಾಮ್ರಾಜ್ಯ ಮತ್ತಷ್ಟು ಜರ್ಜರಿತವಾಯಿತು. ಈ ತರುವಾಯದ ಮೊಗಲ್ ಸಾರ್ವಭೌಮರೆಂದರೆ ಮೊದಲನೆಯ ಬಹಾದುರ್ ಷಹ ಅಥವಾ ಮೊದಲನೆಯ ಷಹ ಆಲಂ (1707 - 12), ಜಹಂದರ್ ಷಹ(1712 - 13), ಫರುಕ್ಸೆಯಾರ್ (1713 - 19), ರಫೀದ್ - ಉದ್ - ದರಾಜತ್ (1719), ರಫಿ, - ಉದ್ - ದೌಲತ್ (1719), ನೆಕುಸಿಯಾರ್ (1719), ಇಬ್ರಾಹಿಂ (1719), ಮಹಮ್ಮದ್ ಷಹ (1719 - 48), ಅಹಮದ್ ಷಹ (1748 - 54), ಎರಡನೆಯ ಆಲಂಗೀರ್ (1754 - 59), ಎರಡನೆಯ ಷಹ ಆಲಂ (1759 - 1806), ಎರಡನೆಯ ಅಕ್ಬರ್ (1806 - 37), ಹಾಗೂ ಎರಡನೆಯ ಬಹಾದುರ್ ಷಹ (1837 - 38).
 ಮೊದಲನೆಯ ಪಾಣಿಪತ್ ಕದನದಲ್ಲಿ (1526) ಜಯಗಳಿಸಿದ ಬಾಬರ್ ಮೊಗಲ್ ಸಾಮ್ರಾಜ್ಯ ಸ್ಥಾಪಿಸಿದ. ಎರಡನೆಯ ಪಾಣಿಪತ್ ಕದನದಲ್ಲಿ (1556) ಜಯಪಡೆದು ಅಕ್ಬರ್ ಅದನ್ನು ಸದೃಢಗೊಳಿಸಿದ. ಮೂರನೆಯ ಪಾಣಿಪತ್ ಕದನದಲ್ಲಿ (1761) ಅದೇ ಮೊಗಲ್ ಸಾಮ್ರಾಜ್ಯ ಮಾರಕ ಆಘಾತಕ್ಕೀಡಾದುದು ಇತಿಹಾಸ ವ್ಯಂಗ್ಯಗಳಲ್ಲೊಂದು. ಔಧ್‍ನ ನವಾಬ ಶೂಜಾ-ಉದ್-ದೌಲನ ಸಹಾಯ ಪಡೆದ ಅಹಮದ್ ಷಹ ಅಬ್ದಾಲಿ ಮೊಗಲ್ ಸಮ್ರಾಟ ಷಹ ಆಲಂ ಹಾಗೂ ಆತನ ಮರಾಠ ಬೆಂಬಲಿಗರನ್ನು ಈ ನಿರ್ಣಾಯಕ ಹೋರಾಟದಲ್ಲಿ ಸೋಲಿಸಿದ. ತರುವಾಯ ಮೊಗಲ್ ಸಾಮ್ರಾಜ್ಯದ ಅಸ್ತಿತ್ವ ಹಾಗು ಸ್ಥಾನಮಾನ ತೀರಾ ಹೀನಾಯಕರವಾದುದಾಗಿತ್ತು. ಈ ಕಾಲದ ಇತಿಹಾಸವೆಂದರೆ ಆಂತರಿಕ ಕಚ್ಚಾಟ, ಹಿಂದೂಗಳ ದಂಗೆ ಹಾಗೂ ಬ್ರಿಟಿಷರ ಒಡೆದು ಆಳುವ ಕುಟಿಲ ರಾಜಕಾರಣಗಳಷ್ಟೇ. ಕೊನೆಯ ಮೊಗಲ್ ಸುಲ್ತಾನ ಎರಡನೆಯ ಬಹಾದುರ್ ಷಹ ಬ್ರಿಟಿಷರು ನೀಡಿದ ವರ್ಷಾಶನವನ್ನು ಅವಲಂಬಿಸಿ ಬದುಕಬೇಕಾಯಿತು. 1858 ರ ಪ್ರಸಿದ್ಧದಂಗೆಯಲ್ಲಿ ಈತನ ಪಾತ್ರವಿದ್ದಿತೆಂಬ ಆರೋಪದ ಮೇಲೆ ಈತನನ್ನು ರಂಗೂನಿಗೆ ಕಳುಹಿಸಲಾಯಿತು, 1862ರಲ್ಲಿ ಈತ ಮೃತನಾದ.

ಆಡಳಿತ: ಮೊಗಲರ ಆಡಳಿತ ವ್ಯವಸ್ಥಿತವಾಗಿ ರೂಪುಗೊಂಡಿದ್ದು ಅಕ್ಬರ್‍ನ ಕಾಲದಲ್ಲಿ. ಮೊಗಲರ ಆಡಳಿತ ವ್ಯವಸ್ಥೆಯಲ್ಲಿ ಸುಲ್ತಾನನಿಗೆ ಪರಮೋಚ್ಛ ಸ್ಥಾನ; ಆತನ ನಿರ್ಧಾರ ಪ್ರಶ್ನಾತೀತ; ಆತನ ಮಾತೇ ವೇದವಾಕ್ಯ, ಆಡಳಿತ, ಸೈನ್ಯ, ನ್ಯಾಯ ಮುಂತಾದ ಎಲ್ಲ ಕ್ಷೇತ್ರಗಳಲ್ಲಿಯೂ ಆತನೇ ಸರ್ವಾಧಿಕಾರಿ. ಹೀಗಾಗಿ ಆತ ಸಮರ್ಥನೂ ಸ್ಥಿರಚಿತ್ತನೂ ಸಬಲನೂ ಆಗಿರಬೇಕಿತ್ತು. ಆದರೆ ಪ್ರಭುತ್ವ ವಂಶಪಾರಂಪರ್ಯವಾಗಿ ಬರುತ್ತಿದ್ದುದರಿಂದ ಎಲ್ಲ ತೆರನ ವ್ಯಕ್ತಿಗಳೂ ಮೊಗಲ್ ಸಿಂಹಾಸನವನ್ನೇರಿದರು. ದುರ್ಬಲ ಸುಲ್ತಾನರ ಕಾಲದಲ್ಲಿ ಆಡಳಿತ ಶಿಥಿಲವಾಯಿತು. ಸುಲ್ತಾನನದಿಗೆ ಹಲವು ಮಂತ್ರಿಗಳಿದ್ದರೂ ದಿವಾನ, ಮೀರ್‍ಬಕ್ಷಿ, ಮೀರ್‍ಸಮನ್ ಹಾಗೂ ಸದ್ರಸ್‍ಸದ್ರ್ ಪ್ರಮುಖರಾಗಿದ್ದರು. ಮಂತ್ರಿ ಹುದ್ದೆಗೆ ಸರಿಸಮನಾದ ಹಲವಾರು ಅಧಿಕಾರದ ಪದವಿಗಳಿದ್ದವು. ಇವರ ನೇಮಕ ಸುಲ್ತಾನನ ಇಚ್ಛಾನುಸಾರ ನಡೆಯುತ್ತಿತ್ತು. ಜನಾಭಿಪ್ರಾಯವನ್ನು ಸುಲ್ತಾನನಿಗೆ ಪರಿಣಾಮಕಾರಿಯಾಗಿ ತಿಳಿಸಬಲ್ಲ ಯಾವ ಸಂಘ ಸಮಿತಿಯೂ ಇರಲಿಲ್ಲ. ಸುಲ್ತಾನ ಪ್ರಭಾವಶಾಲಿಯಾಗಿರುವ ತನಕ ಆಡಳಿತಯಂತ್ರ ಆತನ ಮರ್ಜಿಗನುಗುಣವಾಗಿ ನಡೆಯುತ್ತಿತ್ತು; ಆದರೆ ಆತನು ದುರ್ಬಲನಾದಾಗ ಮಹತ್ವಾಕಾಂಕ್ಷಿ ಹಾಗೂ ತುಂಬ ಪ್ರಭಾವಶಾಲಿ ಮಂತ್ರಿ, ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಸುಲ್ತಾನ ಕುಣಿಯ ಬೇಕಾದ ಅನಿವಾರ್ಯ ಪರಿಸ್ಥಿತಿ ಏರ್ಪಟ್ಟಿತು.

ಅಧಿಕಾರಷಾಹಿಯಲ್ಲಿ ನಾಗರಿಕ ಹಾಗೂ ಸೈನಿಕ ಎಂಬ ಭೇದವಿರಲಿಲ್ಲ. (ಹಿರಿಯ ಅಧಿಕಾರಿಗಳೆಲ್ಲ ಮೂವತ್ತರ ಮೂರು ಶ್ರೇಣಿಗಳಲ್ಲಿ ಸೇರಿದವರಾಗಿದ್ದರು (ಮನ್‍ಸಬ್‍ದಾರರು). ಮೊದಲು ಇವರ ವೇತನ ನಗದಿನ ರೂಪದಲ್ಲಿತ್ತು; ಕ್ರಮೇಣ ವಿಭಾಗದಲ್ಲಿ ಆದಾಯದ ವಸೂಲಿಯಲ್ಲಿ ಭಾಗಶಃ ಅಥವಾ ಜಾಗೀರಿನ ರೂಪದಲ್ಲಿ ಕೊಡಲಾಯಿತು. ಈ ಮನ್‍ಸಬ್‍ದಾರಿ ವ್ಯವಸ್ಥೆಯೇ ಮೊಗಲ್ ಆಡಳಿತದ ತಳಹದಿಯಾಗಿತ್ತು. ಅದೇ ಅಧಿಕಾರಿಗಳ ಸ್ಥಾನಮಾನ ಹಾಗೂ ವೇತನಗಳನ್ನು ನಿರ್ಧರಿಸುತ್ತಿತ್ತು. ಈ ಹುದ್ದೆಗಳಿಗೆ ಯಾವುದೇ ಅರ್ಹತೆ ಅಥವಾ ಪರೀಕ್ಷೆಯಲ್ಲಿ ತೇರ್ಗಡೆ ಬೇಕಿರಲಿಲ್ಲ; ಸುಲ್ತಾನನ ಕೃಪೆಯೇ ಬೇಕಾದ ಅರ್ಹತೆ. ಪ್ರಧಾನವಾಗಿ ಮುಸ್ಲಿಮರನ್ನು, ವಿಶೇಷವಾಗಿ ಪರಕೀಯ ಮುಸ್ಲಿಮರನ್ನು ಅಧಿಕಾರಿಗಳಾಗಿ ನೇಮಕ ಮಾಡುತ್ತಿದ್ದುದೇ ಹೆಚ್ಚು. ಸ್ಥಳೀಯ ಜನರ ಭಾವನೆ ಅಭಿಪ್ರಾಯಗಳಿಗೆ ಬೆಲೆ ಕೊಡುತ್ತಿರಲಿಲ್ಲ.

ಸಾಮ್ರಾಜ್ಯವನ್ನು ಹಲವಾರು ಸುಬಾಗಳಾಗಿ ವಿಂಗಡಿಸಲಾಗಿತ್ತು. ಅಕ್ಬರನ ಕಾಲದಲ್ಲಿ 15, ಜಹಾಂಗಿರನ ಕಾಲದಲ್ಲಿ 17 ಹಾಗೂ ಔರಂಗಜೇಬನ ಕಾಲದಲ್ಲಿ 21 ಸುಬಾಗಳಿದ್ದುವು. ಒಂದೊಂದು ಸುಬಾ ಹಲವು ಸರ್ಕಾರಗಳಿಂದ (ಬ್ರಿಟಿಷರ ಕಾಲದ ಜಿಲ್ಲೆಗಳಿಗೆ ಸಮನಾದದ್ದು ಸರ್ಕಾರ) ಕೂಡಿತ್ತು; ಸರ್ಕಾರ ಹಲವು ಗ್ರಾಮ ಸಹಿತವಾದ ಪರಗಣಗಳಿಂದ ಕೂಡಿತ್ತು. ಪ್ರಾಂತೀಯ ಆಡಳಿತದ ಮುಖ್ಯಸ್ಥ ಸುಬಾದಾರ; ಇವನಷ್ಟೇ ಪ್ರಮುಖನಾದ ಮತ್ತು ಕಂದಾಯ ಆಡಳಿತದ ಉಸ್ತುವಾಯಿಯನ್ನು ನೋಡಿಕೊಳ್ಳುವ ದಿವಾನನೂ ಇದ್ದ. ಇಬ್ಬರೂ ಪರಸ್ಪರ ಪ್ರತಿಬಂಧಕಗಳಂತೆ ಇದ್ದುದರಿಂದ ಪ್ರಾಂತ್ಯದಲ್ಲಿ ದಂಗೆಯ ಸಂಭವನೀಯತೆ ಅತ್ಯಲ್ಪವಾಗಿತ್ತು. ಬಕ್ಷಿ, ಖ್ವಾಜಿ, ಸದ್ರ್ ಮುಂತಾದ ಅಧಿಕಾರಿಗಳಿದ್ದು ಆಡಳಿತದಲ್ಲಿ ನೆರವಾಗುತ್ತಿದ್ದರು. ಪ್ರತಿಯೊಂದು ಸರ್ಕಾರದ ಕಾನೂನು ಮತ್ತು ಶಾಂತಿಪಾಲನೆ ಫೌಜುದಾರನೆಂಬ ಅಧಿಕಾರಿಯದಾಗಿತ್ತು. ಪ್ರಮುಖ ಪುರ ಪಟ್ಟಣಗಳಲ್ಲಿ ಕೊತ್ವಾಲನೆಂಬ ಅಧಿಕಾರಿ ಇರುತ್ತಿದ್ದ. ಪ್ರಾಂತ್ಯದ ಸಮಾಚಾರ ತಿಳಿಸುವ ವರದಿಗಾರರೂ ರಹಸ್ಯ ವರದಿ ಕಳಿಸುವ ಗೂಢಚಾರರು ಇದ್ದುದರಿಂದ ಎಚ್ಚರ ವಹಿಸಬೇಕಾದ ಸಂದರ್ಭಗಳು ಮುಂಚಿತವಾಗಿಯೇ ಸುಲ್ತಾನನಿಗೆ ತಿಳಿಯುತ್ತಿದ್ದವು.

ಭೂಕಂದಾಯವೇ ಮೊಗಲ್ ಸಾಮ್ರಾಜ್ಯದ ಆದಾಯದ ಪ್ರಧಾನ ಮೂಲ. ಸುಂಕ, ಕಪ್ಪಕಾಣಿಕೆ, ಟಂಕಮುದ್ರೆ, ಯುದ್ಧದಲ್ಲಿಯ ಲೂಟಿವಸ್ತುಗಳು ಮೊದಲಾದವು ಆದಾಯದ ಕೆಲವು ಬಾಬುಗಳು. ಸಾಮಾನ್ಯವಾಗಿ ಒಟ್ಟು ಬೆಳೆಯ ಮೂರನೆಯ ಒಂದು ಭಾಗವನ್ನು ರೈತ ಒಪ್ಪಿಸಬೇಕಾಯಿತು. ಬೆಳೆಯನ್ನು ಅಂದಾಜುಮಾಡಲು ವಿರವಾದ ಉಚಿತ ಕ್ರಮಗಳಿದ್ದವು. ನಗದುರೂಪಕ್ಕೆ ಹೆಚ್ಚು ಪ್ರಾಶಸ್ಯ್ತವಿದ್ದರೂ ಕಂದಾಯವನ್ನು ನಗದು ಅಥವಾ ಧಾನ್ಯರೂಪಗಳಲ್ಲಿ ನೀಡಬಹುದಿತ್ತು. ತತ್ಪೂರ್ವದ ಮೂರು ಅಥವಾ ಹತ್ತು ವರ್ಷಗಳಲ್ಲಿದ್ದ ಧಾನ್ಯ ಬೆಲೆಗಳನ್ನು ಪರಿಶೀಲಿಸಿ ನಗದಿನ ಮೊತ್ತ ನಿರ್ಧಾರವಾಗುತ್ತಿತ್ತು. ಸಾಮ್ರಾಜ್ಯದ ಎಲ್ಲೆಡೆ ಕಂದಾಯ ಪದ್ಧತಿ ಏಕರೂಪವಾಗಿರಲಿಲ್ಲ.

ಮೊಗಲ್ ಸೇನಾಬಲ ಪದಾತಿ, ಅಶ್ವ, ಫಿರಂಗಿ ಹಾಗೂ ನೌಕಾದಳಗಳಿಂದ ಕೂಡಿತ್ತು. ಆಶ್ವದಳಕ್ಕೆ ಹೆಚ್ಚಿನ ಪ್ರಾಧಾನ್ಯವಿತ್ತು; ಪದಾತಿದಳ ಸಂದರ್ಭಾನುಸಾರ ನಾಗರಿಕ ಹಾಗೂ ರೈತಾಪಿ ಜನರಿಂದ ಕೂಡಿದುದಾಗಿತ್ತು. ಸ್ಥಳೀಯ ಅಥವಾ ವಿದೇಶೀ ಬಂದೂಕುಗಳಿಂದ ಕೂಡಿದ ಫಿರಂಗಿ ದಳ ಹಿಂದೂರಾಜ್ಯಗಳಿಗೆ ಹೋಲಿಸಿದರೆ ಉತ್ತಮವಾದುದೂ ಬ್ರಿಟಿಷರ ಬಲಕ್ಕೆ ಹೋಲಿಸಿದರೆ ಅಷ್ಟೇನೂ ಉತ್ತಮವಲ್ಲದ್ದಾಗಿತ್ತು. ನದಿಗಳಲ್ಲಿಯ ವಾಹನಸಂಚಾರ ಸಂರಕ್ಷಣೆ ನಿಯಂತ್ರಣಗಳಿಗಷ್ಟೇ ಅವರ ನೌಕಾದಳ ಸೀಮಿತವಾಗಿತ್ತು. ಸಮುದ್ರಮಾರ್ಗ ಸಂಚಾರಗಳತ್ತ ಗಮನಕೊಡದಿದ್ದುದು ಮೊಗಲ್ ಆಡಳಿತದ ಪ್ರಧಾನ ದೋಷಗಳಲ್ಲೊಂದು. ಮನ್‍ಸಬ್‍ದಾರಿ ವ್ಯವಸ್ಥೆಗೆ ಅನುಗುಣವಾಗಿ ರೂಪಿತವಾದ ಮೊಗಲ್ ಸೇನೆಯಲ್ಲಿ ಶಿಸ್ತು ತರಬೇತಿಗಳಿರಲಿಲ್ಲ; ರಾಜಸ್ತಾನದ ವೈಭವ ಪ್ರದರ್ಶನ ಯುದ್ಧರಂಗದಲ್ಲಿಯೂ ಇತ್ತು. ಅದಕ್ಷತೆ ಮನೆ ಮಾಡಿತ್ತು. ಹೀಗಾಗಿ 1739ರಲ್ಲಿ ನಾದಿರ್ ಷಹನಿಂದ ಮೊಗಲ್ ಸೈನ್ಯ ಪರಾಜಿತವಾಯಿತು. ಮುಂದೆ ಅಹಮದ್‍ಷಹ ಅಬ್ದಾಲಿಯಿಂದ ಸೋಲುಂಡಿತು; ಇಂಗ್ಲಿಷರ ಶ್ರೇಷ್ಠ ಯುದ್ಧ ಸಾಮಗ್ರಿ ಸಂಪತ್ತಿನ ಮುಂದೆ ಮೊಗಲ್ ಸೈನ್ಯ ಶರಣಾಗಬೇಕಾಯಿತು.

ವಾಸ್ತುಶಿಲ್ಪ: ಜನಸಾಮಾನ್ಯರ ಬಾಳು ದುಸ್ಸಹನೀಯವಾಗಿದ್ದರೂ ಮೊಗಲರ ಆಡಳಿತ ಕಾಲದಲ್ಲಿ ವಾಸ್ತುಶಿಲ್ಪಕ್ಕೆ ವಿಶೇಷ ಪ್ರೋತ್ಸಾಹ ದೊರೆಯಿತು. ಬಾಬರನ ಕಾಲದಲ್ಲಿ ಆಗ್ರಾ, ಸಿಕ್ರಿ ಮುಂತಾದ ಕಡೆಗಳಲ್ಲಿ ಸಾವಿರಾರು ಶಿಲ್ಪಿಗಳು ನಿರ್ಮಾಣ ಕಾರ್ಯಗಳಲ್ಲಿ ತೊಡಗಿದ್ದರು. ಆದರೆ ಈ ಕಾಲದ ಕಟ್ಟಡಗಳಲ್ಲಿ ಕೆಲವು ಅವಶೇಷಗಳು ಮಾತ್ರ ಲಭ್ಯವಾಗಿವೆ. ಷೇರ್‍ಷಹನ ಕಾಲದಲ್ಲಿ ಕಟ್ಟಲಾದ ದೆಹಲಿಯ ಪುರಾನಾಕಿಲಾ ಎಂದು ಕರೆಯಲಾಗಿರುವ ರಚನೆ ಹಾಗೂ ಸಸಾರಾಮ್‍ನಲ್ಲಿರುವ ಸಮಾಧಿ ಕಟ್ಟಡಗಳು ಗಮನಾರ್ಹ. ಈ ಎರಡನೆಯ ಕಟ್ಟದಲ್ಲಿ ಹಿಂದೂ ಮತ್ತು ಮುಸ್ಲಿಮ್ ವಾಸ್ತುಶಿಲ್ಪ ಕಲ್ಪನೆಗಳ ಮಧುರ ಸಂಗಮವನ್ನು ನೋಡಬಹುದು. ಅಕ್ಬರ್ ಸ್ವತಃ ಒಬ್ಬ ವಾಸ್ತುಶಿಲ್ಪಜ್ಞನಾಗಿದ್ದ. ಫತೇಪುರ್‍ಸಿಕ್ರಿ ಈತನ ಕಲ್ಪನಾ ಸಾಮಾಥ್ರ್ಯದ ನನಸು; ಇದನ್ನು ಆತನ ಮನಸ್ಸಿನ ದರ್ಪಣವೆಂದೂ ಕರೆಯಲಾಗಿದೆ. ವಿಶೇಷವಾಗಿ ಅಮೃತಶಿಲೆಯನ್ನು ಬಳಸಲಾಯಿತು. ದಿವಾನ್-ಎ-ಖಾನ್ ಜಾಮಿಮಸೀದಿ, ಪಂಚಮಹಲ್ ಮುಂತಾದವು ಈ ಕಾಲದ ಗಮನಾರ್ಹ ಕಟ್ಟಡಗಳು, ನೂರ್‍ಜಹಾನ್ ಕಟ್ಟಿಸಿದ ಇತ್ಮದುದ್ದೌಲನ ಸಮಾಧಿ ರಜಪೂತ ಶೈಲಿಯನ್ನು ಅನುಕರಿಸಿ ಕಟ್ಟಿದ ವಿಶಿಷ್ಟ ರಚನೆ. ಷಹಜಹಾನ್ ಕಟ್ಟಿಸಿದ ತಾಜ್‍ಮಹಲ್ (ನೋಡಿ- ತಾಜ್‍ಮಹಲ್) ಹೃನ್ಮನ ಸೊರೆಗೊಳ್ಳುವ, ಅನುಪಮ ಭವ್ಯ ಸಮಾಧಿ ಕಟ್ಟಡ. ಷಹಜಹಾನನ ತರುವಾಯ ಮೊಗಲ್ ವಾಸ್ತುಶಿಲ್ಪ ಉಪೇಕ್ಷೆಗೀಡಾಗಿ ಅವನತಿ ಹೊಂದಿತು. ಔರಂಗಜೇಬನ ಕಟ್ಟಾ ಧರ್ಮನಿಷ್ಠೆ ಕಲಾಕರ್ಮಿಗಳ ಪ್ರತಿಭೆಗೆ ಮಾರಕವಾಗಿ ಪರಿಣಮಿಸಿತು. (ನೋಡಿ- ಭಾರತೀಯ-ವಾಸ್ತುಶಿಲ್ಪ)							(ಎಚ್.ಎಂ.ಎನ್.ಆರ್.)

	ನಾಣ್ಯಗಳು: ಹಿಂದೂಸ್ಥಾನದಲ್ಲಿ ಮುಸ್ಲಿಮರ ಆಗಮನದಿಂದ ಇವರ ನಾಣ್ಯಗಳು ನಮ್ಮಲ್ಲಿ ಬೆಳಕಿಗೆ ಬಂದವು. ಇವರ ಕಾಲದಲ್ಲಿ ನಾಣ್ಯಗಳ ಬೆಳೆವಣಿಗೆಯೂ ಸ್ವಲ್ಪ ಮಾರ್ಪಾಡಾಯಿತು. ಮುಖ್ಯವಾಗಿ ಈ ಬದಲಾವಣೆಯು ನಾಣ್ಯಗಳನ್ನು ತಯಾರಿಸಲು ಬಳಕೆಯಲ್ಲಿದ್ದ ಧಾತುವಿನಿಂದ ಶುರುವಾಯಿತು. ಆಗ ಬಳಕೆಯಲ್ಲಿದ್ದ ಧಾತುಗಳೆಂದರೆ ಬಂಗಾರ, ಬೆಳ್ಳಿ, ಬಿಲ್ಲಾನ್ (ಬೆಳ್ಳಿ ಮತ್ತು ತಾಮ್ರ ಅಥವಾ ಕಂಚಿನ ಮಿಶ್ರಣ) ಮತ್ತು ತಾಮ್ರ. ನಾಣ್ಯಗಳನ್ನು 'ಸಿಕ್ಕ ಎಂದು ಕರೆಯುತ್ತಿದ್ದರು. 'ಸಿಕ್ಕ ಎಂದರೆ ಮುದ್ರಿಸಿದ ಎಂಬ ಅರ್ಥವೇ ಹೊರತು ನಾಣ್ಯಗಳ ಮೌಲ್ಯಮಾಪನವನ್ನು ತೋರಿಸುತ್ತಿರಲಿಲ್ಲ. ನಾಣ್ಯಗಳ ಮೇಲೆ ರೂಪಾಯಿ, ಅರ್ಧರೂಪಾಯಿ ಎಂಬ ಮೌಲ್ಯವನ್ನು ಮುದ್ರಿಸುತ್ತಿರಲಿಲ್ಲ. ನಾಣ್ಯಗಳು ಸಾಮಾನ್ಯವಾಗಿ ಗುಂಡಗಿದ್ದರೂ ಚೌಕಾಕಾರದ ಮತ್ತು ಬೇರೆ ಬೇರೆ ಆಕಾರಗಳ ನಾಣ್ಯಗಳು ಬಳಕೆಯಲ್ಲಿದ್ದವು. 

	ನಾಣ್ಯಗಳ ಮೇಲೆ ರಾಜನ ಹೆಸರು. ಅವನ ಬಿರುದಾವಳಿಗಳನ್ನೊಳಗೊಂಡ ಬರೆವಣಿಗೆ ಇರುತ್ತಿತ್ತು. ದೊರೆ ಪಟ್ಟಾಭಿಷಿಕ್ತನಾಗುತ್ತಿದ್ದಂತೆಯೇ ಅವನ ಹೆಸರನ್ನು ನಾಮಾವಳಿ ಪುಸ್ತಕದಲ್ಲಿ ಬರೆದು ಅವನ ಹೆಸರಿನಲ್ಲಿ ನಾಣ್ಯಗಳನ್ನು ನಾಣ್ಯಗಳ ಮೇಲೆ ನಾಣ್ಯ ಮುದ್ರಿಸಿದ ದಿನಾಂಕ ಮತ್ತು ಟಂಕಸಾಲೆಯ ಹೆಸರನ್ನು ಮುದ್ರಿಸಿದರು. ಮೊದಮೊದಲು ಇವುಗಳ ಮೇಲೆ ಅರೇಬಿಕ್ ಮತ್ತು ಪರ್ಷಿಯನ್ ಭಾಷೆಗಳನ್ನು ಉಪಯೋಗಿಸುತ್ತಿದ್ದರು. ಮೊಟ್ಟಮೊದಲು ಬೆಳಕಿಗೆ ಬಂದ ನಾಣ್ಯಗಳಲ್ಲಿಯ ಬರೆವಣಿಗೆ 'ತೂಫಿ ಆಗಿದ್ದು ಸ್ವಲ್ಪಕಾಲದ ಅನಂತರ ನಷ್ಕ ಎಂಬ ಬರೆವಣಿಗೆ ಅದರ ಸ್ಥಾನವನ್ನು ಆಕ್ರಮಿಸಿತು, ಕಾಲಕ್ರಮೇಣ ಸಸ್ತಾಲಿಕ್ ಬಳಕೆಗೆ ಬಂದಿತು. ದಿನಾಂಕವನ್ನು ಹಿಜರಿ ಶಕೆಯಲ್ಲಿ ನಮೂದಿಸಲಾಗುತ್ತಿತ್ತು. ಅಂಕೆಗಳನ್ನು ಹದಿನೈದನೆಯ ಶತಮಾನದತನಕ ಶಾಸನಗಳಲ್ಲಿ ಉಪಯೋಗಿಸದೇ ಇದ್ದರೂ ನಾಣ್ಯಗಳಲ್ಲಿ ಹನ್ನೆರಡನೆಯ ಶತಮಾನದಿಂದಲೇ ಅಂಕಗಳ ಪ್ರಯೋಗವು ಪ್ರಾರಂಭವಾಯಿತು.

ನಾಣ್ಯಗಳ ನಮೂನೆಯಗಳು ಅದರ ತೂಕ, ಬೆಲೆ ಮತ್ತು ಧಾತುವಿನ ಮೇಲೆ ನಿರ್ಧಾರವಾಗುತ್ತಿತ್ತು. ಒಂದು ತೊಲ ಅಂದರೆ 96 ರತಿಗಳು ಅಥವಾ 172.8 ಗುಂಜಿಗಳಾಗಿರುತ್ತಿತ್ತು. ಬೆಳ್ಳಿಯ ನಾಣ್ಯಕ್ಕೆ ಸಮವಾಗಿತ್ತು. ನಾಣ್ಯದ ಮೌಲ್ಯವನ್ನು ದೊರೆಯ ಹೆಸರು. ಬಿರುದಾವಳಿ ಮತ್ತು ಅವುಗಳ ತೂಕದಿಂದ ನಿರ್ಧರಿಸಲಾಗುತ್ತಿತ್ತು. ಮುದ್ರಿಸಿದ ತಾರೀಖು, ಬಿರುದು, ಟಂಕಸಾಲೆ ಇವೆಲ್ಲ ಒಂದೇ ಆದರೆ ಅವುಗಳನ್ನು ಒಂದೇ ನಮೂನೆಗೆ ಸೇರಿಸಲಾಗುತ್ತಿತ್ತು. ಇವುಗಳಲ್ಲಿ ವ್ಯತ್ಯಾಸವಿದ್ದರೆ ಬೇರೆ ನಮೂನೆಯಾಗಿ ವಿಂಗಡಿಸಲಾಗುತ್ತತ್ತು. ಬಾಬರನ ಕಾಲದಲ್ಲಿ ಮಧ್ಯಏಷ್ಯ ಮಾದರಿಯ ನಾಣ್ಯಗಳು ಮುದ್ರಿಸಲಾದವು. ಅಕ್ಬರನ ಕಾಲದಲ್ಲಿ ನಿಜವಾದ ಮೊಗಲ್ ರೀತಿಯನ್ನೇ ಅನುಸರಿಸಿದ; ಅಲ್ಲದೆ ಅವನು ನಿಯಮಿಸಿದ್ದ ತೂಕವನ್ನೇ ಸಂಪೂರ್ಣವಾಗಿ ಅಳವಡಿಸಿಕೊಂಡ. ತಾಮ್ರದಲ್ಲಿ 660 ಗುಂಜಿಯು ತೂಕದ ನಾಣ್ಯವನ್ನು ಹೊರಡಿಸಿ ಅದನ್ನು 'ಟಂಕ ಎಂದು ಕರೆದ. ಮೊದಲು ಈ ಹೆಸರನ್ನು ಬೆಳ್ಳಿಯ ನಾಣ್ಯಗಳಿಗೆ ಕೊಡಲಾಗಿತ್ತು. ಈತನ ಮೊದಲ ಮೂವತ್ತು ವರ್ಷಗಳ ರಾಜ್ಯಭಾರದಲ್ಲಿ ನಾಣ್ಯಗಳಲ್ಲಿ ಯಾವ ರೀತಿಯ ಬದಲಾವಣೆಯೂ ಬರಲಿಲ್ಲ. ಆದರೆ ಮೂವತ್ತು ವರ್ಷಗಳ ಅನಂತರ ನಾಣ್ಯಗಳ ಮೇಲೆ ಬರುವ ದಂತಕಥೆ ಮತ್ತು ಬಿರುದುಗಳನ್ನು ಬದಲಾಯಿಸಲಾಯಿತು. ಅಕ್ಬರ್ ತನ್ನ ಹೆಸರನ್ನು ತೆಗೆದು ಬದಲಾಗಿ 'ಲಾ ಇಲಾಹಿ ಉಲ್ಲುಲ್ಲ ಮೊದಲಾದುವನ್ನು ಸೇರಿಸಿದ. 'ಅಲ್ಲಾಹ್ ಉ ಅಕ್ಬರ್ ಇಲ್ಲಾ ಇಲಾಲುಹ (ದೇವರು ದೊಡ್ಡವನು, ಅವನ ದಯೆ ಯಾವಾಗಲೂ ಇರಲಿ) ಎಂಬ ಬರೆಹವನ್ನು ಸೇರಿಸಿದ. ಮುಂಭಾಗದಲ್ಲಿ ಬರೆಹವಿದ್ದರೆ ಹಿಂಭಾಗದಲ್ಲಿ ಟಂಕಶಾಲೆಯ ಹೆಸರು ಮುದ್ರಿಸಲಾಗುತ್ತಿತ್ತು.

	ಈತ ಮೊಟ್ಟ ಮೊದಲ ಬಾರಿಗೆ ದೆಹಲಿ ಸುಲ್ತಾನರ ನಾಣ್ಯಗಳನ್ನು ಟಂಕಿಸಿ ಅವುಗಳ (ಚಿನ್ನ ಬೆಳ್ಳಿ ನಾಣ್ಯಗಳ) ಮೇಲೆ ದ್ವಿಪದಿಯಲ್ಲಿ ದಂತಕಥೆಗಳನ್ನು ಮುದ್ರಿಸಿದ. ಪಕ್ಷಿ ಮತ್ತು ಪ್ರಾಣಿಗಳನ್ನು ಪರ್ಷಿಯನ್ ಭಾಷೆಯಲ್ಲಿ ವರ್ಷ ಮತ್ತು ತಿಂಗಳನ್ನು ನಮೂದಿಸಲು ಆರಂಭಿಸಿದ. ಆದರೆ ಈ ನಾಣ್ಯಗಳ ಸಂಖ್ಯೆ ಕಡಿಮೆ ಇದ್ದಿತು. ಕಾಲಕ್ರಮೇಣ ಹಿಜರಿ ಶಕೆಯಲ್ಲಿಯೂ ಕಾಲವನ್ನು ಸೂಚಿಸಲು ಪ್ರಾರಂಭಿಸಿದ. ಇವನ ಕಾಲದಲ್ಲಿ 'ದಮಡಿ' ಎಂಬ ನಾಣ್ಯ ಬೆಳಕಿಗೆ ಬಂದುದಲ್ಲದೆ 1/3, 1/4, 1/2 ಅಂಶಗಳನ್ನು 1/10, 1/4, 1/20 ಎಂಬ ದಶಮಾಂಶಗಳನ್ನು ಆರಂಭಿಸಿದ. ಟಂಕ ಆಥವಾ ಟಂಕಿಗಳನ್ನು ಮುದ್ರಿಸಿ ಅದರಮೇಲೆ ಎರಡು ಟಂಕಿ, ನಾಲ್ಕು ಟಂಕಿ ಎಂದು ಮುದ್ರಿಸಿದ. ತಾಮ್ರದ ನಾಣ್ಯಗಳನ್ನು ಬಿಟ್ಟರೆ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳಲ್ಲಿ ಮೌಲ್ಯವನ್ನು ನಮೂದಿಸಿಲ್ಲ. ಇವನ 'ಜಾಲ್ಲಾಜಲಾಲು ಮಾದರಿಯ ನಾಣ್ಯಗಳು ಅತ್ಯಂತ ಕಲಾಪೂರ್ಣವಾಗಿವೆ. ಈತ ಒಂದು, ಐದು, ಹತ್ತು, ನೂರು ಮತ್ತು ಇನ್ನೂರು ತೊಲಗಳ ನಾಣ್ಯಗಳನ್ನು ಆರಂಭಿಸಿದ. ಇವುಗಳಲ್ಲಿ ಹೆಚ್ಚು ತೂಕದ್ದು e್ಞÁಪಕಾರ್ಥವಾಗಿ ಬಿಡುಗಡೆ ಮಾಡಿದವುಗಳಾಗಿದ್ದವು. ಅಲ್ಲದೆ, ಮೊತ್ತಮೊದಲಿಗೆ ಇವನ ಕಾಲದಲ್ಲಿ ಬಹಳ ಸಣ್ಣ ನಾಣ್ಯಗಳೂ ಚಲಾವಣೆಗೆ ಬಂದವು. ಇವುಗಳನ್ನು ನಿಧರ್, ನೂರ್ ಆಫ್ಸ್‍ನ್, ಖಇರ್ ಖುಬುಲಿ ಎಂದು ಕರೆಯಲಾಗುತ್ತಿತ್ತು. ಇವುಗಳನ್ನು ಕಾಣಿಕೆಯಾಗಿ ನೀಡಲು ಉಪಯೋಗಿಸುತ್ತಿದ್ದರು.

	ಜಹಾಂಗೀರನ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳು ತಯಾರಿಕೆ ಮತ್ತು ನಮೂನೆಯಲ್ಲಿ ಅತ್ಯುತ್ತಮವಾದುವೆಂದು ಹೆಸರುಗಳಿಸಿವೆ. ನಾಣ್ಯಗಳ ಮೇಲೆ ಶ್ಲೋಕಗಳನ್ನು ಮುದ್ರಿಸಿದ್ದು ಅದರಲ್ಲಿ ರಾಜನ ಹೆಸರು ಮತ್ತು ಟಂಕಸಾಲೆಯ ಹೆಸರು ಇರುತ್ತಿತ್ತು. ಅಕ್ಬರ್ ಮತ್ತು ಜಹಾಂಗೀರನ ಚಿತ್ರಪಟಗಳಿಂದ ಕೂಡಿದ ಬಲುಸುಂದರ ನಾಣ್ಯಗಳೂ ಸಹ ದೊರಕಿವೆ. ಇವುಗಳನ್ನು ಚಿತ್ರಪಟಗಳ ಮೊಹರು ಕರೆಯಲಾಗುತ್ತಿತ್ತು. ಕೆಲಕಾಲದ ಅನಂತರ ರಾಶಿ ಚಕ್ರ ಅಥವಾ ರಾಶಿ ಮಂಡಲವನ್ನು ನಾಣ್ಯಗಳ ಮೇಲೆ ಮುದ್ರಿಸಲಾಯಿತು. ಇವುಗಳನ್ನು ಅಗ್ರಟಂಕ ಸಾಲೆಯಿಂದ ಟಂಕಿಸಲಾಯಿತು.

	ಷಹಜವಾನ್ ಚೌಕಾಕಾರದ ಮತ್ತು ಗುಂಡಗಿರುವ ನಾಣ್ಯಗಳನ್ನು ಜೊತೆ ಜೊತೆಯಾಗಿ ಮುದ್ರಿಸಿದ. ಈತ ಚಾಂದ್ರಮಾನ ವರ್ಷವನ್ನು ನಾಣ್ಯಗಳ ಮೇಲೆ ಮುದ್ರಿಸಿ ಸೌರಮಾನ ಮತ್ತು ಹಿಜರಿ ಶಕೆಯನ್ನು ಸಂಪೂರ್ಣವಾಗಿ ಕೈಬಿಟ್ಟ.

	ಔರಂಗಜೇಬನ ಕಾಲದಲ್ಲಿ ಕರ್ನಾಟಕದ ಕೆಲವು ಭಾಗಗಳು ಅವನ ಆಡಳಿತಕ್ಕೆ ಒಳಪಟ್ಟಿದ್ದುವು. ದೊಡ್ಡಬಳ್ಳಾಪುರ, ಹೊಸಕೋಟೆ, ಗುತ್ತಿ ಮತ್ತು ಕೋಲಾರ ಮೊದಲಾದ ಸ್ಥಳಗಳಲ್ಲಿನ ಟಂಕಸಾಲೆಗಳಲ್ಲಿ ಚಿನ್ನದ 'ಪಣಂ' ನಾಣ್ಯಗಳು ಟಂಕಿಸಲ್ಪಟ್ಟಿದ್ದವು. ದೇವನಹಳ್ಳಿ ಮತ್ತು ನಂದಿಯಲ್ಲಿ ಟಂಕಿಸಲಾದ ಹಣಗಳೂ ಬೆಳಕಿಗೆ ಬಂದಿವೆ.				
					(ಸಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ